ಬಾಲಮುರಳಿಕೃಷ್ಣ, ಮಂಗಳಂಪಲ್ಲಿ	
1930- ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಪ್ರಸಿದ್ಧ ಗಾಯಕರು, ವಾಗ್ಗೇಯಕಾರರು ಮತ್ತು ವಿದ್ವಾಂಸರು. ಆಂಧ್ರಪ್ರದೇಶದ ಶಂಕರ ಗುಪ್ತಮ್ ಎಂಬಲ್ಲಿ ಜನನ, 6-7-1930ರಲ್ಲಿ. ತಂದೆ ಮಂಗಳಂಪಲ್ಲಿ ಪಟ್ಟಾಭಿರಾಮಯ್ಯ, ವೇಣು ವಿದ್ವಾಂಸರು. ತಾಯಿ ಸೂರ್ಯಕಾಂತಮ್ಮ ವೀಣಾ ವಿದುಷಿ. ತಂದೆಯ ಸಂಗೀತ ಗುರುಗಳಾಗಿದ್ದ ಸುರ್ಸಲ ದಕ್ಷಿಣಾಮೂರ್ತಿ ಶಾಸ್ತ್ರಿಗಳು ತ್ಯಾಗರಾಜ ಸ್ವಾಮಿಗಳ ಶಿಷ್ಯ ಪರಂಪರೆಗೆ ಸೇರಿದವರು. ಬಾಲ್ಯದಿಂದಲೇ ಸಂಗೀತದತ್ತ ವಿಶೇಷ ಒಲವು ಪ್ರದರ್ಶಿಸಿದ ಮುರಳಿ ಕೃಷ್ಣರಿಗೆ ತಂದೆಯೇ ಮೊದಲ ಗುರು. ಕಛೇರಿ ಮಾಡಲು ಪ್ರಾರಂಭಿಸಿದ ಮೇಲೆ 1940ರಿಂದ ಪಾರುಪಲ್ಲಿ ರಾಮಕೃಷ್ಣಯ್ಯ ಪಂತಲು ಅವರಲ್ಲಿ ಶಿಷ್ಯ ವೃತ್ತಿ ಮುಂದುವರಿಯಿತು. ಸ್ವಪ್ರಯತ್ನದಿಂದ ಪಿಟೀಲು, ವಯೋಲಾ, ವೀಣೆ, ಮೃದಂಗ, ಖಂಜರಿ ವಾದನದಲ್ಲೂ ಪರಿಣತಿ ಪಡೆದರು. ಮೊದಲ ಸಂಗೀತ ಕಛೇರಿ ವಿಜಯವಾಡದಲ್ಲಿ ನಡೆಯಿತು. ಆಗ ಇವರಿಗೆ ಎಂಟುವರ್ಷ. ಮಸನೂರಿ ಸತ್ಯನಾರಾಯಣ ಎಂಬ ಹರಿಕಥಾ ವಿದ್ವಾಂಸರು `ಬಾಲ ಎಂಬ ಪ್ರಶಸ್ತಿ ನೀಡಿ ಹರಿಸಿದರು. `ಮುರಳಿಕೃಷ್ಣ ಅಂದಿನಿಂದ ಬಾಲಮುರಳಿಕೃಷ್ಣ ಎಂದೇ ಪ್ರಸಿದ್ಧ. 1939ರಲ್ಲಿ ಮದರಾಸು ಬಾನುಲಿ ಕೇಂದ್ರದಿಂದ ಇವರ ಮೊದಲ ಕಛೇರಿ ಪ್ರಸಾರವಾಯಿತು. 1941ರಲ್ಲಿ ತಿರುವಯ್ಯಾರಿನಲ್ಲಿ ನಡೆದ ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಹಲವು ಹಾಡುಗಳನ್ನು ಹಾಡಿದಾಗ ಎಲ್ಲರ ಗಮನವನ್ನೂ ತಮ್ಮತ್ತ ಸೆಳೆದರು. ಬಿಡುವಿಲ್ಲದ ಸಂಗೀತ ಕಛೇರಿಗಳ ಕಾರಣ, ವಿದ್ಯಾಭ್ಯಾಸ ಆರನೇ ತರಗತಿಗೆ ನಿಂತಿತು. 1944ರಲ್ಲಿ ಕಛೇರಿಯೊಂದರಲ್ಲಿ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ಯರಿಗೆ ಪಿಟೀಲು ಪಕ್ಕವಾದ್ಯ ನುಡಿಸಿದರು. ಮುಂದೆ ಎಡಬಿಡದೆ ಅನೇಕ ಗಾಯನ, ಪಿಟೀಲು ಹಾಗೂ ವಯೋಲಾ ಕಛೇರಿಗಳು ನಡೆದವು. ವಿಜಯವಾಡ, ಮದರಾಸು ಮತ್ತು ಹೈದರಾಬಾದ್ ಬಾನುಲಿ ಕೇಂದ್ರಗಳಲ್ಲಿ ಹಲವು ವರ್ಷ ಸಂಗೀತ ನಿರ್ಮಾತೃವಾಗಿ ಉದ್ಯೋಗ ಮಾಡಿದರು. ವಿಜಯವಾಡ ಕೇಂದ್ರದಿಂದ ಇವರ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ಭಕ್ತಿ ರಂಜನಿ ಕಾರ್ಯಕ್ರಮ ಬಹಳ ಜನಪ್ರಿಯತೆ ಗಳಿಸಿತು. ಭಕ್ತ ಪ್ರಹ್ಲಾದ ಎಂಬ ವಾಕ್ಚಿತ್ರದಲ್ಲಿ ಪಾತ್ರ ವಹಿಸಿದ್ದರು. ಅನೇಕ ಭಾಷೆಗಳ ವಾಕ್ಚಿತ್ರಗಳಿಗೆ ಹಿನ್ನೆಲೆ ಗಾಯನ ಒದಗಿಸಿದ್ದಾರೆ. ಇವರು ಸ್ವಂತ ಗಾಯನ ಶೈಲಿ ರೂಪಿಸಿಕೊಂಡು ಜನಪ್ರಿಯತೆ ಗಳಿಸಿದ್ದಾರೆ. ತ್ರ್ರಿಸ್ಥಾಯಿ ಸಂಚಾರದ ವ್ಯಾಪ್ತಿಯುಳ್ಳ ತಮ್ಮ ಶಾರೀರವನ್ನು ಜನರಂಜನೆಗೆ ಅನಾಯಾಸವಾಗಿ ಉಪಯೋಗಿಸಕೊಳ್ಳುವ ಕಲೆ ಇವರಿಗೆ ಸಿದ್ಧಿಸಿದೆ. ವಿಜಯವಾಡ ಸರ್ಕಾರಿ ಸಂಗೀತ ಕಾಲೇಜಿನ ಮುಖ್ಯಸ್ಥರಾಗಿದ್ದರು. ತಿರುವಯ್ಯಾರಿನ ತ್ಯಾಗಬ್ರಹ್ಮ ಮಹೋತ್ಸವ ಸಭೆಯ ಕಾರ್ಯದರ್ಶಿಯಾಗಿದ್ದರು. ತಿರುವಯ್ಯಾರಿನ ತ್ಯಾಗರಾಜಸ್ವಾಮಿ ದೇವಾಲಯದ ಏಕೈಕ ನ್ಯಾಸ ನಿರ್ವಾಹಕ (ಟ್ರಸ್ಟಿ). ಮುರಳಿ ರವಳಿ ಕಲಾಕೇಂದ್ರದ ಅಧ್ಯಕ್ಷ. ಹಲವು ಧ್ವನಿಮುದ್ರಣಗಳನ್ನು ಕೊಟ್ಟಿದ್ದಾರೆ. ಅನೇಕ ಪ್ರಯೋಗ ಮಾಡಿ ಹಲವಾರು ಹೊಸರಾಗ ತಾಳ ಸೂತ್ರಗಳನ್ನು ರೂಪಿಸಿದ್ದಾರೆ. ಇವುಗಳ ಪೈಕಿ ನಾಲ್ಕೇ ಸ್ವರಗುಳುಳ್ಳ ಮಹತಿ ಸಮುಖ ರಾಗಗಳೂ ಮೂರೇ ಸ್ವರಗಳುಳ್ಳ ಓಂಕಾರಿ, ಸರ್ವಶ್ರೀ ತ್ರಿಶಕ್ತಿ, ರೋಹಿಣಿ, ಪ್ರತಿಮಧ್ಯಮಾವತಿ, ಜನಸಂಮೋದಿನಿ, ವಲ್ಲಭಿ, ಲವಂಗಿ. ರಾಗಗಳು ಗಮನಾರ್ಹ. ವಿವಾದಿ ಮೇಳಗಳು, ರಾಗಸೃಷ್ಟಿ ಮುಂತಾದ ವಿಷಯಗಳ ಬಗ್ಗೆ ಇವರ ನಿಲವು ಸಂಗೀತ ಕ್ಷೇತ್ರದಲ್ಲಿ ವಾದ ವಿವಾದಗಳಿಗೆ ಎಡೆ ಕೊಟ್ಟಿದೆ. ಹಾಗೆಯೇ ಕಛೇರಿಗಳ ನಡುವೆ ವಿರಾಮ, ಸ್ವಂತ ರಚನೆಗಳ ಗಾಯನ, ಟೀಕೆಗೆ ಒಳಗಾಗಿವೆ. ಸಾರ್ವಜನಿಕ ಸಭೆಗಳಲ್ಲಿ ಆಶುಕವಿಯಾಗಿ ಹೊಸರಾಗಗಳನ್ನೂ ತಾಳಗಳನ್ನೂ ಸಾಹಿತ್ಯವನ್ನೂ ರೂಪಿಸಿ ಪ್ರದರ್ಶಿಸಿದ್ದಾರೆ. ಪಾಶ್ಚಿಮಾತ್ಯ ಪೌರಸ್ತ್ಯ ದೇಶಗಳಲ್ಲಿ ಸಂಚರಿಸಿ ಕಛೇರಿ ಮಾಡಿದ್ದಾರೆ. ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳನ್ನು ಬಾನುಲಿಯಲ್ಲೂ ದೂರದರ್ಶನದಲ್ಲೂ ಕೊಟ್ಟಿದ್ದಾರೆ.

ವೆಂಕಟೇಶ್ವರ ವಿಶ್ವವಿದ್ಯಾನಿಲಯ ಸೇರಿದಂತೆ. ದಕ್ಷಿಣ ಭಾರತದ ಮೂರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸನ್ಮಾನ, ಕೇಂದ್ರ ಸರ್ಕಾರದಿಂದ ಪದ್ಮಶ್ರೀ, ಪದ್ಮವಿಭೂಷಣ, ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಯುನೆಸ್ಕೊವಿನ ಮಹಾತ್ಮಗಾಂಧಿ ಬೆಳ್ಳಿ ಪದಕ ಪುರಸ್ಕøತರು. ಮುಂಬಯಿಯ ಸುರ್‍ಸಿಂಗಾರ್ ಸಂಸದ್ ಪ್ರಶಸ್ತಿ, ಗಜವಾಹನ ಮೆರವಣಿಗೆಯ ಗೌರವ ಸಂದಿದೆ. ಹಂಸಗೀತೆ ಕನ್ನಡ ವಾಕ್ಚಿತ್ರದ ಅತ್ಯುತ್ತಮ ಸಂಗೀತ ನಿರ್ದೇಶಕರೆಂದೂ ಹಿನ್ನೆಲೆ ಗಾಯಕರೆಂದೂ ಭಾರತ ಸರ್ಕಾರದಿಂದ ಪ್ರಶಸ್ತಿ ಮುಂತಾದವನ್ನು ಪಡೆದಿದ್ದಾರೆ. ಮದರಾಸ್ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಸಂಗೀತ ಕಲಾನಿಧಿ ಬಿರುದಿಗೆ ಭಾಜನರಾಗಿದ್ದಾರೆ. ಕಲಾ ಪ್ರಪೂರ್ಣ ನಾದಸುಧಾರ್ಣವ ಮುಂತಾದ ಇತರ ಬಿರುದುಗಳೂ ಸಂದಿವೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳಿಂದ ಅಂತೆಯೇ ತಿರುಮಲೆ ತಿರುಪತಿ, ಶೃಂಗೇರಿ ಶಾರದಾಪೀಠ ಅನ್ನವರಮ್, ದುರ್ಗಾಮಲ್ಲೇಶ್ವರಂ ದೇವಸ್ಥಾನಗಳಿಂದ ಆಸ್ಥಾನ ವಿದ್ವಾಂಸರಾಗಿ ನೇಮಿಸಲ್ಪಟ್ಟಿದ್ದಾರೆ.

ಹದಿನಾಲ್ಕನೆಯ ವಯಸ್ಸಿನಲ್ಲಿ 72 ಮೇಳ ಕರ್ತರಾಗಗಳ ಬಗೆಗೆ ಪಂಥ ರಚಿಸಿದರು. ಸ್ವಂತರಚನೆ ತಿಲ್ಲಾನಗಳು, ಪಾಲಯಾಷಿ ಎಂಬ ಸಾವಿರಾರು ರಾಗಗಳ ಸ್ವರೂಪವನ್ನೂ ಸ್ಪಷ್ಟಪಡಿಸುವ ನಿಘಂಟು-ಇವು ಬಾಲಮುರಳಿ ಕೃಷ್ಣರ ಪ್ರಕಟಣೆಗಳು. ಸ್ವಿಟ್ಜರ್ಲೆಂಡ್‍ನಲ್ಲಿ ಪ್ರದರ್ಶನ ಕಲೆಗಳ ಬಗೆಗೆ ಸಂಶೋಧನೆ ಕೇಂದ್ರ ಸ್ಥಾಪಿಸಿದ್ದಾರೆ. ದೇಶವಿದೇಶಗಳಲ್ಲಿ ನಡೆಸಿರುವ ಕಛೇರಿಗಳು ಅಸಂಖ್ಯ. ಸಂಗೀತ ಚಿಕಿತ್ಸೆ ಇವರ ಆಸಕ್ತಿಯ ವಿಷಯ.							(ಟಿ.ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ